ಹಿರಿಯ ನಾಗರೀಕರಿಗೆ ಸಂಬಂಧಿಸಿದಂತೆ ತಡೆಯುವ ದುರ್ಘಟನೆಗಳು ಅತಿ ಸಾಮಾನ್ಯ ಅಲ್ಲದೇ ಈ ರೀತಿಯ ಅಪರಾಧಗಳು ಸಮಾಜದ ನೆಮ್ಮದಿಯನ್ನು ಕೆಡಿಸುತ್ತವೆ. ನಿಮ್ಮ ಸಂಬಂಧಿಕರು ಯಾರಾದರೂ 60 ವರ್ಷ ಮೇಲ್ಪಟ್ಟವರಾಗಿದ್ದಲ್ಲಿ ಅಥವಾ ನಿಮ್ಮ ನೆರೆ ಹೊರೆಯವರು ಯಾರಾದರೂ ಇದ್ದಲ್ಲಿ ಈ ಕೆಳಗಿನ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡು ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಬಹುದು.
1) ಮನೆಯ ಸುತ್ತಮುತ್ತ ಸಿಸಿ ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿ.
2) ಅಕ್ಕ ಪಕ್ಕದವರೊಂದಿಗೆ ಸ್ನೇಹದಿಂದಿರಿ. ಸಂಬಂಧಿತ ಠಾಣೆಯ ಪೊಲೀಸ್‍ನವರೊಂದಿಗೆ ಸಂಪರ್ಕದಲ್ಲಿರಿ.
3) ಅಪರಿಚತರೊಂದಿಗೆ ನಿಮ್ಮ ಪರಿಚಯ ಹಂಚಿಕೊಳ್ಳಬೇಡಿ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರನ್ನು ಮನೆಯ ಒಳಗೆ ಸೇರಿಸಬಾರದು.
4) ಬೆಲೆ ಬಾಳುವ ಆಭರಣಗಳು ಮತ್ತು ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.
5) ಮನೆಯಲ್ಲಿ ಹೊಸದಾಗಿ ಕೆಲಸಕ್ಕೆ ನೇಮಕ ಮಾಡಿಕೊಳ್ಳುವವರ ಕುರಿತು ಎಚ್ಚರಿಕೆಯಿಂದಿರಬೇಕು ಮತ್ತು ಅವರ ಸಂಪೂರ್ಣ ಮಾಹಿತಿ ಪಡೆದು ಹತ್ತಿರದ ಠಾಣೆಯಲ್ಲಿ ನೀಡಬೇಕು.
6) ಮನೆಯಿಂದ ಹೊರ ಹೋಗಬೇಕಾದಲ್ಲಿ ಜೊತೆಗೆ ಒಬ್ಬರನ್ನು ಕರೆದೊಯ್ಯಿರಿ.
7) ಪ್ರಮುಖವಾಗಿ ಅಪರಾಧ / ದೂರುಗಳು ಸಂಬಂಧಿತ ಠಾಣೆಗಳಲ್ಲಿ ನೊಂದಾಯಿತಗೊಳ್ಳುವವು. ಒಂದು ವೇಳೆ ಅಥವಾ ಆಕಸ್ಮಾತ್ತಾಗಿ ಘಟನೆ ನಡೆದ ಸ್ಥಳದಲ್ಲಿ ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ದೂರು ನೀಡಬಹುದು. ನಂತರ ದೂರು ಸಂಬಂಧಿತ ಠಾಣೆಗಳಿಗೆ ವರ್ಗಾಯಿಸಲ್ಪಡುವುದು.
8) ಪ್ರತಿಯೊಂದು ಠಾಣೆಯಲ್ಲಿ ಸೌಜನ್ಯಯುತ ಸ್ವಾಗತ ನೀಡಲಾಗುವುದು.
9) ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಉತ್ತಮ ಸ್ಥಳದ ವ್ಯವಸ್ಥೆ ಮತ್ತು ಶೌಚಾಲಯದ ವ್ಯವಸ್ಥೆ ಹೊಂದಿರುತ್ತದೆ.
10) ಠಾಣಾಧಿಕಾರಿಗಳು ಸೌಜನ್ಯಯುತವಾಗಿ ದೂರನ್ನು ಆಲಿಸುವರು.
11) ಸಾರ್ವಜನಿಕರಿಗೆ ಬೇಕಾದ ಮಾಹಿತಿ ಮತ್ತು ದೂರುಗಳ ಕುರಿತು ಸ್ಪಷ್ಟೀಕರಣ ನೀಡಲಾಗುವುದು.
12) ಠಾಣಾಧಿಕಾರಿ ಅಥವಾ ಸಂಬಂಧಿತ ಠಾಣೆಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ತಕ್ಷಣವೇ ಧಾವಿಸಿ ಸ್ಥಳ ಪರಿಶೀಲನೆ ನಡೆಸುವರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಬಹುತೇಕ ದೈಹಿಕ ಮತ್ತು ಲೈಂಗಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಹಣಕ್ಕಾಗಿ ಮಕ್ಕಳ ಅಪಹರಣ, ಭಿಕ್ಷಾಟನೆಗೆ, ಲೈಂಗಿಕ ಶೋಷಣೆಗೆ ಮಕ್ಕಳು ಬಲಿಯಾಗುತ್ತಿರುವುದು ಇತ್ತೀಚೆಗೆ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ವಯಸ್ಕರಂತೆ ಮಕ್ಕಳೂ ಕೂಡ ಕಳ್ಳತನ, ಸುಲಿಗೆ, ಅತ್ಯಾಚಾರ, ಕ್ರೂರ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಈ ಕೆಳಕಂಡ ಕೆಲವು ಮುನ್ನೆಚ್ಚರಿಕೆಗಳನ್ನು ತಂದೆ ತಾಯಿಗಳು, ಶಿಕ್ಷಕರು ತಮ್ಮ ಮಕ್ಕಳ ವಿಷಯದಲ್ಲಿ ತೆಗೆದುಕೊಂಡರೆ ಮಕ್ಕಳನ್ನು ಈ ರೀತಿಯ ತೊಂದರೆಗೆ ನಿಲುಕದಂತೆ ರಕ್ಷಿಸಬಹುದು.
1) ಮಕ್ಕಳಿಗೆ ತಮ್ಮ ಹಕ್ಕುಗಳ, ಸ್ವರಕ್ಷಣೆ ಮತ್ತು ಸಮಾಜದಲ್ಲಿ ಅವುಗಳ ಪಾತ್ರವನ್ನು ಮನವರಿಕೆ ಮಾಡಿಕೊಡಬೇಕು.
2) ಶಾಲೆಯ ಮತ್ತು ಮನೆಯ ಸುತ್ತ ಮುತ್ತಲಿನ ವಾತಾವರಣವನ್ನು ಸಂಪೂರ್ಣವಾಗಿ ತಿಳಿದುಕೊಂಡಿರಬೇಕು.
3) ಮಕ್ಕಳು ತಮ್ಮ ಶತ್ರುಗಳ ಮತ್ತು ಮಿತ್ರರ ಮಧ್ಯೆ ವ್ಯತ್ಯಾಸ ಗುರುತಿಸುವಂತೆ ಶಿಕ್ಷಣ ನೀಡಬೇಕು.
4) ಮಕ್ಕಳು ಒಂಟಿಯಾಗಿ ಹೋಗುವುದನ್ನು, ಅಪರಿಚಿತರ ಜೊತೆ ಮಾತನಾಡುವುದು, ಅವರು ನೀಡಿದ ತಿಂಡಿ, ತಿನಿಸುಗಳನ್ನು ತಿನ್ನದಂತೆ, ಅವರೊಂದಿಗೆ ಹೋಗದಂತೆ ತಿಳಿ ಹೇಳಬೇಕು.
5) ಮಕ್ಕಳು ತಮ್ಮ ತಂದೆ-ತಾಯಿಗಳ / ಪೋಷಕರ ಹೆಸರು, ಮನೆಯ ವಿಳಾಸ ಮತ್ತು ಪೋನ್ ನಂಬರ್‍ಗಳನ್ನು ಹೇಳುವಂತಿರಬೇಕು.
6) ಪೋಷಕರು ಮಕ್ಕಳು ಬೆಲೆಬಾಳುವ ವಸ್ತು / ಆಭರಣ ಧರಿಸದಂತೆ ಎಚ್ಚರ ವಹಿಸಬೇಕು.
7) ಪೋಷಕರು ಮಕ್ಕಳಿಗೆ ಪೊಲೀಸರೊಂದಿಗೆ ಸ್ನೇಹವಾಗಿ ವರ್ತಿಸಲು ಪೊಲೀಸರು ಕಷ್ಟದ ಸಮಯದಲ್ಲಿ ನೆರವಾಗುವ ಸ್ನೇಹಿತರೆಂದು ಮನವರಿಕೆ ಮಾಡಿಕೊಡಬೇಕು.
8) ಮಕ್ಕಳು ಧೈರ್ಯವಾಗಿ ಮತ್ತು ಮುಕ್ತವಾಗಿ ಮಾತನಾಡುವುದನ್ನು ಹೇಳಿಕೊಡಬೇಕು.
9) ಮಕ್ಕಳು ಅನುಮಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಗುರುತಿಸುವ ಸ್ಥಿತಿಯಲ್ಲಿರಬೇಕು.
10) ಮಕ್ಕಳು ಸರಳ ರೀತಿಯಲ್ಲಿ ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳುವುದನ್ನು ಕಲಿಯಬೇಕು ಮತ್ತು ತುರ್ತು ಪರಿಸ್ಥಿತಿಯಲ್ಲಿ ಧೈರ್ಯದಿಂದ ಅವನ್ನು ಬಳಸಬೇಕು.
11) ಯಾರಾದರೂ ಕರೆಗಂಟೆ ಒತ್ತಿದಾಗ ಮಕ್ಕಳು ಬಾಗಿಲು ತೆಗೆಯದಂತೆ ನೋಡಿಕೊಳ್ಳಬೇಕು.
12) ಅಪರಿಚಿತರೊಂದಿಗೆ ಮಕ್ಕಳ ಸ್ನೇಹ ಸಲ್ಲದು.
ಮನೆ, ಕುಟುಂಬ ನೀವು ಮತ್ತು ನಿಮ್ಮ ಆಸ್ತಿಯ ರಕ್ಷಣೆಯ ಹೊರತಾಗಿ ನಿವು ಸಮಾಜದಲ್ಲಿ ಅಪರಾಧವನ್ನು ತಡೆಗಟ್ಟಲು ಹೆಚ್ಚಿನ ಸಹಯೋಗ ನೀಡಬಹುದು. ನಿಮ್ಮ ಮನೆಯ ಸುತ್ತ ಮುನ್ನಲಿನ ಅಕ್ಕಪಕ್ಕದ ಜನರೊಂದಿಗೆ ಸೇರಿಕೊಂಡು ಸುತ್ತ ಮುತ್ತಲೂ ಇತ್ತೀಚೆಗೆ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡಬಹುದು. ಬಿಡುವಿನ ಸಮಯದಲ್ಲಿ ಸುತ್ತ ಮುತ್ತಲಿನವರೊಂದಿಗೆ ಅಪರಾಧಗಳನ್ನು ತಡೆಗಟ್ಟುವಂತೆ ಪರಸ್ಪರ ಎಚ್ಚರಿಕೆ ನೀಡಬಹುದು. ಸಂಬಂಧಿತ ಠಾಣೆಯೊಂದಿಗೆ ಉತ್ತಮ ಸಂಬಂಧವಿಟ್ಟುಕೊಂಡು ಯಾವುದೇ ಸಂಶಯಾಸ್ಪದ, ಅಪರಿಚಿತ ವ್ಯಕ್ತಿಗಳ ಬಗ್ಗೆ ಅನುಮಾನವಿದ್ದಲ್ಲಿ ಮುನ್ಸೂಚನೆ ನೀಡಬಹುದು. ಈ ಕೆಳಕಂಡ ಕೆಲವು ವಿಷಯಗಳತ್ತ ಗಮನಹರಿಸಿ ಅಪರಾಧವನ್ನು ಸ್ವಲ್ಪಮಟ್ಟಿಗೆ ತಡೆಗಟ್ಟುವಲ್ಲಿ ನೀವು ಪ್ರಮುಖ ಪಾತ್ರವಹಿಸಬಹುದು.
1) ಸುತ್ತಮುತ್ತಲಿನ ಮನೆ/ಮನೆಯವರ ಮೇಲೆ ಆಗಾಗ ಗಮನಹರಿಸಿ, ಪಕ್ಕದ ಮನೆಯವರು ಮನೆಯಲ್ಲಿ ಇಲ್ಲದಾಗ ಅವರ ಮನೆಯತ್ತ ಒಂದು ದೃಷ್ಟಿ ಇರಲಿ.
2) ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ದರೋಡೆ, ಕಳ್ಳತನ ಸುಲಿಗೆ ಹೆಚ್ಚಾಗಿ ಆಗುವ ಪ್ರದೇಶಗಳಲ್ಲಿ ಸಂಬಂಧಿತ ಬೀಟ್ ಪೊಲೀಸರೊಂದಿಗೆ ಸೇರಿಕೊಂಡು ಆಗಾಗ ರಾತ್ರಿ ಗಸ್ತು ಪಾಳಿ ಮಾಡಿ.
3) ಅನುಮಾನಾಸ್ಪದವಾಗಿ ಕಾಣುವ ವ್ಯಕ್ತಿ, ಅವಶ್ಯಕತೆಗಿಂತ ಹೆಚ್ಚಿನ ಹಣವನ್ನು ಉಡಾಯಿಸುತ್ತಿರುವ ವ್ಯಕ್ತಿ ಕಂಡುಬಂದಲ್ಲಿ ಈ ಕುರಿತು ಹತ್ತಿರದ ಠಾಣೆಗೆ ಸೂಚನೆ ನೀಡಿ.
4) ಹೊಸದಾಗಿ ಅಕ್ಕಪಕ್ಕದಲ್ಲಿ ಬರುವವರ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿ, ಅನುಮಾನವಿದ್ದಲ್ಲಿ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಿದ್ದಲ್ಲಿ ಪೊಲೀಸರು ಈ ಕುರಿತು ಕ್ರಮ ತೆಗೆದುಕೊಳ್ಳುವರು.
5) ಕಮ್ಯುನಿಟಿ ಪೊಲೀಸಿಂಗ್‍ನ ಒಬ್ಬ ಸದಸ್ಯನಾಗಿ ಆ ಸಮುದಾಯ ಅಥವಾ ಕಾಲೋನಿಯಲ್ಲಿ ಇರುವ ಯುವ ಜನಾಂಗವು ಕೆಟ್ಟ ಚಟಗಳಿಗೆ ದಾಸರಾಗುತ್ತಿರುವುದು ಕಂಡುಬಂದಲ್ಲಿ ಈ ಕುರಿತು ತಂದೆ ತಾಯಿ/ಪೋಷಕರ ಅಲ್ಲದೇ ಪೊಲೀಸರ ಗಮನಕ್ಕೆ ತಂದಲ್ಲಿ ಈ ಕುರಿತು ಮುಂದಿನ ಕ್ರಮಕೈಗೊಳ್ಳಲು ಸಹಕಾರಿಯಾವುದು.
6) ಸಮೀಪದ ಪೊಲೀಸ್ ಠಾಣೆಯ ಅನುಮತಿ ಪಡೆದು ನಿರುದ್ಯೋಗ ಯುವಕರು ಸಮಾಜಮುಖಿ ಕಾರ್ಯಗಳನ್ನು ಮಾಡಬಹುದು.
7) ಸಮೀಪದ ಠಾಣೆಯಲ್ಲಿನ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ತಂದೆ ತಾಯಿಗಳು/ಪೋಷಕರು ತಮ್ಮ ಮಕ್ಕಳನ್ನು ಇತರ ಸಮಾಜಕ್ಕೆ ಉಪಯೋಗವಾಗುವ ಕಾರ್ಯ ಚುಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಯಿಸುವ ಸಂಘ ಸಂಸ್ಥೆಗಳಿಗೆ ಸೇರಿಸಬಹುದು.
8) ನಿಮ್ಮ ಅಕ್ಕಪಕ್ಕದ ಮನೆಯವರಿಗೆ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಒಂದು ಕಣ್ಣಿಡಲು ಹೇಳಿ ಅನುಮಾನ ಖಚಿತವಾದಲ್ಲಿ ಸಮೀಪದ ಠಾಣೆಗೆ ಸೂಚಿಸಿ ಮತ್ತು ನಿಮಗೆ ತಿಳಿದಂತಹ ಖಚಿತವಾದ ಮಾಹಿತಿ ನೀಡಿ.
9) ನೆರೆಹೊರೆಯವರೊಂದಿಗೆ ಸ್ನೇಹದಿಂದಿರಿ. ಆಗಾಗ ಸಮುದಾಯದವರಲ್ಲಿ ಒಟ್ಟಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿ.
10) ಹಿರಿಯ ನಾಗರೀಕರಿಗೆ ಅವರ ದಿನನಿತ್ಯದ ಕಾರ್ಯದಲ್ಲಿ ತೊಂದರೆಯಾದಲ್ಲಿ ನೇರವಾಗಿ ನೀಡು ನಿಮ್ಮ ಪಕ್ಕದವರೊಂದಿಗೆ ಸ್ನೇಹದಿಂದ ಇರುವಿರಾದಲ್ಲಿ ಅವರು ನಿಮ್ಮೊಂದಿಗೆ ಸ್ನೇಹದಿಂದ ವರ್ತಿಸುವರು.
ಒಂಟಿ ಮನೆಗಳು ಸಾಧಾರಣವಾಗಿ ಡಕಾಯಿತಿ ಮಾಡಲ್ಪಡುತ್ತವೆ. ಬಹುದಿನದಿಂದ ಬಂದ್ ಆಗಿರುವ ಮನೆಗಳು ದರೋಡೆಗೆ ಒಳಲ್ಪಡುತ್ತವೆ. ಡಕಾಯಿತಿಗಳು ಸಾಮಾನ್ಯವಾಗಿ ಹೆಚ್ಚಿನ ಶಬ್ಧ ಮಾಡುವ ಸ್ಥಳದಲ್ಲಿ, ಜನ ಸಂದಣಿ ಇರುವ ಸ್ಥಳದಲ್ಲಿ ನಡೆಯುವುದಿಲ್ಲ. ಪ್ರತಿಯೊಂದು ಸಮುದಾಯದಲ್ಲೂ ಮನೆಗಳಲ್ಲಿ ಹೆಚ್ಚಿನ ನಿಗಾ ವಹಿಸಿದ್ದಲ್ಲಿ ಕಳ್ಳತನ ಸುಲಿಗೆ ದರೋಡೆಗಳನ್ನು ತಪ್ಪಿಸಬಹುದು.
1) ಗೇಟ್ ಮತ್ತು ಕಾಂಪೌಂಡ್‍ಗಳನ್ನು ಭದ್ರಪಡಿಸಬೇಕು, ಸುರಕ್ಷತೆ ದೃಷ್ಟಿಯಿಂದ ಗೇಟ್‍ಗಳಿಗೆ ಗ್ಲಾಸ್ ಚೂರುಗಳನ್ನು ಸಿಕ್ಕಿಸುವುದು, ಹಿಂಬಾಗಿಲುಗಳನ್ನು ಕಬ್ಬಿಣದ ಬಾರ್ ಹೊಂದಿದ ಬಾಗಿಲುಗಳಿಂದ ಭದ್ರಪಡಿಸಿ.
2) ಮುಂದಿನ ಬಾಗಿಲುಗಳ ಮೇಲೆ ಮತ್ತು ಕೆಳಗೆ ಸೂಕ್ತ ಬೀಗಗಳನ್ನು ಹೊಂದಿರಲಿ.
3) ಕಬ್ಬಿಣದ ಸರಳುಗಳಿಂದ ಕಿಟಕಿಗಳು ಬಲವಾಗಿ ಕಟ್ಟಿರಲಿ.
4) ಬೆಳಕಿಂಡಿ ಮತ್ತು ಸಣ್ಣ ಕಿಟಕಿಗಳಲ್ಲೂ ಕೂಡ ಕಳ್ಳರು ನುಸುಳುವ ಸಂಭವವಿರುವ ಕಾರಣ ಸರಳುಗಳಿಂದ ಅವನ್ನು ಭದ್ರಪಡಿಸಿ.
5) ಹೆಚ್ಚಿನ ಬೀಗವನ್ನು ಎಲ್ಲೆಂದರಲ್ಲಿ ಬಚ್ಚಿಡಬೇಡಿ.
6) ಗ್ಯಾರೇಜ್ ಬಾಗಿಲುಗಳನ್ನು ಭದ್ರಪಡಿಸಿ. ಒಂದು ವೇಳೆ ಅವುಗಳು ಮನೆಯ ಮುಖ್ಯ ಬಾಗಿಲಿಗೆ ಅಂಟಿಕೊಂಡಿದ್ದಲ್ಲಿ ಅವುಗಳ ಮೂಲಕವು ಕಳ್ಳರು ನುಸುಳುವ ಸಾಧ್ಯತೆ ಇರುತ್ತದೆ.
7) ಮನೆಯ ಸುತ್ತ ಕೈತೋಟ ಇದ್ದಲ್ಲಿ ಸುತ್ತ ಮುತ್ತಲಿನ ಕಾಂಪೌಂಡನ್ನು ಎತ್ತರ ಮಾಡಿಸಿ ಗಾಜಿನ ಚೂರುಗಳಿಂದ ಭದ್ರಗೊಳಿಸಿ.
8) ಮನೆಯ ಸುತ್ತಮುತ್ತಲೂ ಬೆಳಕಿರುವ ಹಾಗೆ ನೋಡಿಕೊಳ್ಳಿ.
9) ಒಂದು ವೇಳೆ ಅನುಮಾನಸ್ಪಾದವಾಗಿ ಯಾರಾದರೂ ಅಡ್ಡಾಡುವುದು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿಗ ನೀಡಿ.
10) ದೀರ್ಘ ಪ್ರಯಾಣಕ್ಕೆ ಹೋಗುವ ನಿಮ್ಮ ನೆರೆಹೊರೆಯವರಿಗೆ ನಿಮ್ಮ ಮನೆಯತ್ತ ಗಮನವಿರಿಸಲು ಮತ್ತು ಪೊಲೀಸರಿಗೆ ಈ ಕುರಿತು ನೀವು ಹೋಗುವ ಮುನ್ನ ಗಮನಕ್ಕೆ ತನ್ನಿ.
11) ಅಲಾರಂ ಮತ್ತು ಸಿಸಿ ಟಿ.ವಿ.ಗಳನ್ನು ಹೆಚ್ಚಿನ ಸುರಕ್ಷತೆಗಾಗಿ ಅಳವಡಿಸಿ.
ದರೋಡೆ / ಡಕಾಯಿತಿಗಳನ್ನು ತಡೆಗಟ್ಟುವುದು :
1) ದರೋಡೆ ಮಾಡುವ ಮುನ್ನ ಟೆಲಿಪೋನ್ ವೈರ್‍ಗಳನ್ನು ಕತ್ತರಿಸಲಾಗುತ್ತದೆ.
2) ಒಂಟಿ ಮನೆಯವರು ಆದಷ್ಟು ಸುತ್ತ ಮುತ್ತಲಿನವರ ಪೋನ್ ನಂಬರ್, ಇತರೆ ಮಾಹಿತಿ ಇಟ್ಟುಕೊಂಡಿರಿ.
3) ಬೆಲೆ ಬಾಳುವ ಆಭರಣ ಮತ್ತು ಹೆಚ್ಚಿನ ನಗದನ್ನು ಇಟ್ಟುಕೊಳ್ಳಬೇಡಿ.
4) ನೀವು ನಿಮ್ಮದೇ ಆದ ಬಂದೂಕನ್ನು ಹೊಂದಿದ್ದರೆ ಅನುಕೂಲ.
5) ದರೋಡೆಗಳಿಗೆ ಒಳಗಾದಾಗ ನಿಮ್ಮ ರಕ್ಷಣೆಗೆ ತಂತ್ರಗಳನ್ನು ಬಳಸಿ, ಸಿಡಿಮದ್ದುಗಳನ್ನು ತಂದಿಟ್ಟುಕೊಳ್ಳಿ. ನೀವು ಅವುಗಳನ್ನು ಸಿಡಿಸಿ ಅಕ್ಕ ಪಕ್ಕದವರ ಗಮನ ಸೆಳೆಯಬಹುದು.
6) ಪೊಲೀಸರನ್ನು ಆದಷ್ಟು ಬೇಗ ಕರೆಯುವ ಕಡೆ ಗಮನಹರಿಸಿ.
ಇತರೆ ಸ್ವಾಧೀನಗಳ
ನಿಮ್ಮ ಕಾರ್, ದ್ವಿಚಕ್ರ ವಾಹನ, ಬೆಲೆ ಬಾಳುವ ಆಭರಣಗಳು, ಬ್ರೀಫ್‍ಕೇಸ್, ಕ್ರೆಡಿಟ್ ಕಾರ್ಡ್ ಇತರೆ ಬೆಲೆಬಾಳುವ ವಸ್ತುಗಳಿದ್ದಲ್ಲಿ ಈ ಕೆಳಕಂಡ ಸೂಚನೆಗಳತ್ತ ಗಮನಹರಿಸಿ.
ಕಾರು ಕಳ್ಳತನ :
1) ಕಾರನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಬೇಡಿ. ಕಾರಿನ ನಿಲುಗಡೆಗೆ ನಿಯುಕ್ತಿಪಡಿಸಿದ ಸ್ಥಳದಲ್ಲಿ ನಿಲ್ಲಿಸಿ.
2) ಕೆಲವೇ ನಿಮಿಷಗಳೇ ಕಾರನ್ನು ನಿಲ್ಲಿಸುವುದಾಗಲೀ ಕೂಡ ಕಾರನ್ನು ಸೂಕ್ತ ರೀತಿಯಲ್ಲಿ ಲಾಕ್ ಮಾಡಿ.
3) ಕಾರಿನ ಒಳಗಡೆ ಬೆಲೆಬಾಳುವ ವಸ್ತುಗಳನ್ನು ಕಾಣುವ ಹಾಗೆ ಇಡಬೇಡಿ.
4) ಸೂಕ್ತ ರೀತಿಯ ಬೀಗ ಮತ್ತು ಭದ್ರತಾ ವ್ಯವಸ್ಥೆಯಿಂದ ಕಾರನ್ನು ಭದ್ರಪಡಿಸಿ.
5) ಕಾರಿನಲ್ಲಿ ರೇಡಿಯೋ ಅಥವಾ ಪ್ಲೇಯರ್ ಇದ್ದಲ್ಲಿ ಅದನ್ನು ತೆಗೆದು ನಿಮ್ಮೊಂದಿಗೆ ಒಯ್ಯಿರಿ.
6) ನಿಮ್ಮ ಸ್ವಂತ/ಪರಿಚಯದ ಗ್ಯಾರೇಜ್ ಆಗಿದ್ದರೂ ಇಗ್ನಿಷನ್ ಕೀಯನ್ನು ತೆಗೆದಿಟ್ಟುಕೊಳ್ಳಿ.
7) ನಿಮ್ಮ ಕಾರಿನ ನೊಂದಣಿ ಸಂಖ್ಯೆಯನ್ನು ಕಾರಿನ ಮುಖ್ಯ ಭಾಗಗಳಲ್ಲಿ ನೊಂದಾಯಿಸಿ. ಒಂದು ವೇಳೆ ಕಾರು ಕಳೆದು ಹೋದಲ್ಲಿ ಅದರ ಪತ್ತೆಗೆ ಪೊಲೀಸರಿಗೆ ಸಹಾಯವಾಗುವುದು.
ದ್ವಿ-ಚಕ್ರ ವಾಹನ ಕಳವು :
1) ದ್ವಿ-ಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ.
2) ಮನೆಯಲ್ಲಿ ಕೂಡ ಸೂಕ್ತ ಸ್ಥಳದಲ್ಲಿ ಗಾಡಿಯನ್ನು ನಿಲ್ಲಿಸಿ, ಅದನ್ನು ಬೀಗ ಹಾಕಿ ಭದ್ರಪಡಿಸಿ.
3) ಎಲ್ಲಿಯಾದರೂ ಕೆಲವೇ ನಿಮಿಷ ನಿಲ್ಲಿಸುವ ಅಗತ್ಯ ಬಿದ್ದಲ್ಲಿ 2 ನಿಮಿಷವಾದರೂ ಬೀಗ ಹಾಕಲು ನಿಷ್ಕಾಳಜಿ ಮಾಡಬೇಡಿ.
4) ಸೂಕ್ತ ರೀತಿಯಲ್ಲಿ ಲಾಕ್ ಮಾಡಿ ಮತ್ತು ನೊಂದಣಿ ಸಂಖ್ಯೆಯನ್ನು ವಾಹನದ ಹಲವಡೆ ನಮೂದಿಸಿ.
5) ದ್ವಿ-ಚಕ್ರ ವಾಹನದಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡಬೇಡಿ.
ಹಣ ಮತ್ತು ಕ್ರೆಡಿಟ್ ಕಾರ್ಡ್ ಇತರೆ ಬೆಲೆ ಬಾಳುವ ವಸ್ತುಗಳನ್ನು ನೀವು ನಿಮ್ಮ ಬ್ಯಾಗ್‍ನಲ್ಲಿ ಕೊಂಡೊಯ್ಯ ಬೇಕಾದಲ್ಲಿ ಈ ಕೆಳಕಂಡ ಅಂಶಗಳನ್ನು ಎಚ್ಚರವಹಿಸಬೇಕು.
1) ನಿಮ್ಮ ಕಣ್ಣಿನ ದೃಷ್ಟಿಯಲ್ಲಿಯೇ ನಿಮ್ಮ ಕೈಚೀಲವಿರಲಿ.
2) ಬ್ಯಾಗ್‍ಗಳನ್ನು ಯಾವುದೇ ರೀತಿಯ ಪ್ರಯಾಣವಾದರೂ ಕೈಯಲ್ಲಿ ಹಿಡಿದುಕೊಳ್ಳಿ.
3) ಕೈಚೀಲ ಸೂಕ್ತ ಜಿಪ್‍ನಿಂದ ಭದ್ರಗೊಳಿಸಿರಲಿ.
4) ಪ್ಯಾಂಟಿನ ಹಿಂದಿನ ಜೇಬಿನಲ್ಲಿ ಪರ್ಸ್ ಮತ್ತು ಕಾರ್ಡ್‍ಗಳನ್ನು ಇಡಬೇಡಿ. ಪಿಕ್ ಪಾಕೇಟ್ ಮಾಡುವವರಿಗೆ ಅದು ಸರಳವಾಗಿ ಸಿಗುವುದು.
5) ಕ್ರೆಡಿಟ್ ಕಾರ್ಡ್ ಒಂದು ವೇಳೆ ಕಳೆದುಹೋದಲ್ಲಿ ಸಂಬಂಧಿತ ಬ್ಯಾಂಕ್ ಮತ್ತು ಪೊಲೀಸರಿಗೆ ಮಾಹಿತಿ ನೀಡಿ.
6) ಜೇಬುಗಳ್ಳರು ಗುಂಪುಗುಂಪಾಗಿ ಕೆಲಸ ಮಾಡುವವರಾಗಿರುತ್ತಾರೆ. ಒಬ್ಬರು ನಿಮ್ಮ ಗಮನವನ್ನು ಬೇರೆಡೆ ಸೆಳೆದರೆ ಮತ್ತೊಬ್ಬರು ಜೇಬಿನ ಪರ್ಸ್ ಹಾರಿಸಿ ಕಣ್ಮರೆಯಾಗುತ್ತಾರೆ. ಈ ಕುರಿತು ಜಾಗರೂಕರಾಗಿರಿ.
7) ಗುಂಪಿನಲ್ಲಿದ್ದಾಗ ಯಾರಾದರೂ ಅಚಾನಕ್ ಅಗಿ ಡಿಕ್ಕಿ ಹೊಡೆದಲ್ಲಿ ನೀವು ನಿಮ್ಮ ಬೆಲೆಬಾಳುವ ವಸ್ತುಗಳನ್ನು ಒಮ್ಮೆ ಪರಿಶೀಲಿಸಿ.
8) ಹೆಚ್ಚಿನ ಹಣವನ್ನು ಕೊಂಡೊಯ್ಯಬೇಕಾದಲ್ಲಿ ಬ್ಯಾಂಕ್‍ನ ಮೂಲಕ ವ್ಯವಹರಿಸಿ. ಇಲ್ಲವಾದಲ್ಲಿ ಒಬ್ಬರನ್ನು ಜೊತೆಗೆ ಕರೆದೊಯ್ಯಿರಿ.
ಆಭರಣಗಳ ಕಳ್ಳತನ:
1) ಧರಿಸಿದ ಆಭರಣಗಳು ಅರಿವಿಲ್ಲದೆಯೇ ಕಿತ್ತುಕೊಂಡು ಒಯ್ಯುವ ಸರಗಳ್ಳತನ ನಿರ್ಜನ ಪ್ರದೇಶದಲ್ಲಿ ಒಂಟೆ ರಸ್ತೆಗಳಲ್ಲಿ ಆಗುತ್ತಿರುತ್ತವೆ ಮತ್ತು ಅತೀ ಗುಂಪು ಇರುವ ರೈಲ್ವೆ ನಿಲ್ದಾಣ, ಬಸ್ ಸ್ಟ್ಯಾಂಡ್ ಇತರೆ ಮಾರ್ಕೆಟ್ ಸ್ಥಳಗಳಲ್ಲಿ ಸರಗಳ್ಳತನ ನಡೆಯುವ ಸಾಧ್ಯತೆ ಇದೆ.
2) ಆದಷ್ಟು ಧರಿಸಿದ ಆಭರಣಗಳನ್ನು ಸೂಕ್ತ ರೀತಿಯಲ್ಲಿ ಮರೆಮಾಚಿಕೊಳ್ಳಿ.
3) ಬೆಲೆಬಾಳುವ ಆಭರಣ ಧರಿಸಿ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ವಾಕಿಂಗ್ ಮಾಡಬೇಡಿ.
4) ರೈಲು/ಬಸ್ಸಿನೊಳಗೆ ನುಗ್ಗಲು ಪ್ರಯತ್ನಿಸಬೇಡಿ.
5) ನಿಮ್ಮ ಗಮನ ಬೇರೆಡೆ ಹರಿಸಿ ನೀವು ಧರಿಸಿರುವ ಆಭರಣಗಳನ್ನು ಕಿತ್ತುಕೊಳ್ಳುವ ಕೌಶಲ್ಯವನ್ನು ಸರಗಳ್ಳರು ಹೊಂದಿರುತ್ತಾರೆ. ಈ ಕುರಿತು ಜಾಗರೂಕರಾಗಿರಿ.
6) ಆಗಾಗ ನೀವು ಧರಿಸುವ ಆಭರಣಗಳು ಮತ್ತು ನಿಮ್ಮ ವಸ್ತುಗಳತ್ತ ನಿಗಾ ಇರಲಿ.
7) ಲಾಕರನ್ನು ಬಳಸುವ ಮುನ್ನ ಸುತ್ತಮುತ್ತಲೂ ನೋಡಿ, ಯಾರೂ ಅಪರಿಚಿತರು ನೋಡುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಿ.